ಕೊಕ್ಕೆಹುಳು

ಅಂಕೈಲೊಸ್ಟೋಮ ಡುಯೋಡಿನೇಲ್ ಎಂಬ ಶಾಸ್ತ್ರೀಯ ಹೆಸರಿನ ಪರತಂತ್ರ ಜೀವಿ (ಹೂಕ್ ವರ್ಮ್). ನೆಮಟೋಡ ವರ್ಗದ ಸ್ಟ್ರಾಂಗೈಲಿಡೀ ಕುಟುಂಬಕ್ಕೆ ಸೇರಿದೆ. ಮನುಷ್ಯನ ಸಣ್ಣಕರುಳಿನ ಜೆಜುನಮ್ ಎಂಬ ಭಾಗದ ಒಳಪದರಕ್ಕೆ ಕಚ್ಚಿಕೊಂಡು ವಾಸಿಸುತ್ತದೆ. ಇದು ಉಷ್ಣ ಹಾಗೂ ಉಪೋಷ್ಣವಲಯ ಪ್ರದೇಶಗಳಲ್ಲಿ ಕೊಕ್ಕೆಹುಳು ರೋಗ (ಅಂಕೈಲೊಸ್ಟೋಮಿಯಾಸಿಸ್-ಹೂಕ್‍ವರ್ಮ್‍ಡಿಸೀಸ್) ಎಂಬ ಪ್ರಬಲವಾದ ಸಾಂಕ್ರಾಮಿಕ ರೋಗವನ್ನುಂಟುಮಾಡುತ್ತದೆ. ರಕ್ತ ಹೀನತೆ ಮತ್ತು ದುರ್ಬಲತೆ ಈ ರೋಗದ ಮುಖ್ಯ ಚಿಹ್ನೆಗಳು.

ಪ್ರೌಢಹುಳುಗಳು ಕೊಳವೆಯಾಕಾರದವು. ದೇಹದ ಮುಂತುದಿ ಕೊಂಚ ಬಾಗಿದೆ. ಹೆಣ್ಣು ಹುಳು ಗಂಡಿಗಿಂತ ಹೆಚ್ಚು ಉದ್ದವಾಗಿಯೂ ದಪ್ಪವಾಗಿಯೂ ಇರುತ್ತದೆ. ಹೆಣ್ಣು ಹುಳುವಿನ ಉದ್ದ 10-13 ಮಿಮೀ. ಗಂಡಿನ ಉದ್ದ 8-10 ಮಿಮೀ. ಹೆಣ್ಣಿನ ದೇಹದ ಹಿಂತುದಿ ಮೊಂಡಾಗಿಯೂ ನೇರವಾಗಿಯೂ ಇದೆ. ದೇಹದ ತಳಭಾಗದಲ್ಲಿ, ದೇಹದ 1/3 ಭಾಗದಷ್ಟು ಹಿಂದಕ್ಕೆ ಜನನದ್ವಾರವಿದೆ. ಗಂಡಿನಲ್ಲಿ ಜನನದ್ವಾರ ದೇಹದ ಹಿಂತುದಿಯಲ್ಲಿರುವ ಕ್ಲೋಯಕ ದ್ವಾರದ ಬಳಿ ತೆರೆದಿರುತ್ತದೆ. ಅಲ್ಲದೆ ಇದರ ಅಕ್ಕಪಕ್ಕಗಳಲ್ಲಿ ಕ್ಯೂಟಿಕಲ್ ಪದರ ಅಗಲವಾಗಿ ಹರಡಿಕೊಂಡಿದ್ದು ಒಂದು ಬಗೆಯ ಮುಚ್ಚಳವಾಗಿ ಮಾರ್ಪಟ್ಟಿದೆ. ಇದಕ್ಕೆ ಕಾಪ್ಯುಲೇಟರಿ ಬರ್ಸ ಎಂಬ ಹೆಸರಿದೆ. ಸಂಭೋಗ ಕಾಲದಲ್ಲಿ ಹೆಣ್ಣನ್ನು ಹಿಡಿದುಕೊಳ್ಳಲು ಇದು ನೆರವಾಗುತ್ತದೆ. ದೇಹದ ಮುಂದಿನ ತುದಿಯ ಮೇಲ್ಭಾಗದಲ್ಲಿ ಬಾಯಿ ಇದೆ. ಬಾಯಿ ಸುತ್ತಲೂ ಕೊಕ್ಕೆಯಂಥ 6 ಹಲ್ಲುಗಳಿವೆ. ಗಂಟಲಿನಲ್ಲಿ ತ್ರಿಕೋನಾಕಾರದ ಮತ್ತು ಚೂಪಾದ ಎರಡು ಹಲ್ಲುಗಳಿವೆ. ಇವುಗಳ ಸಹಾಯದಿಂದ ಕರುಳಿನ ಗೋಡೆಯಲ್ಲಿ ರಂಧ್ರ ಮಾಡಿ ರಕ್ತವನ್ನು ಹೀರಿ ಜೀವಿಸುತ್ತದೆ.
ಪೋಷಕ ಜೀವಿಯ ಕರುಳಿನಲ್ಲಿ ಗಂಡು ಹೆಣ್ಣು ಹುಳುಗಳ ಸಂಭೋಗ ಕ್ರಿಯೆ ನಡೆಯುತ್ತದೆ. ಹೆಣ್ಣಿನ ಗರ್ಭಕೋಶದಲ್ಲಿ ಗರ್ಭಾಂಕುರತೆಯಾಗಿ, ಗರ್ಭಕಟ್ಟಿದ ಮೊಟ್ಟೆಗಳು ಸ್ವಲ್ಪಮಟ್ಟಿಗೆ ಬೆಳೆದು ಪೋಷಕಜೀವಿಯ ಮಲದೊಡನೆ ಹೊರಬರುತ್ತವೆ. ಜೌಗು ಮಣ್ಣು ಮತ್ತು ಸಾಕಷ್ಟು ಉಷ್ಣತೆ ದೊರೆತರೆ 24-48 ಗಂಟೆಗಳ ಕಾಲದಲ್ಲಿ ಡಿಂಬಗಳು ಮೊಟ್ಟೆಯಿಂದ ಹೊರಬೀಳುತ್ತವೆ. ಇವುಗಳ ಮೈ ಸುತ್ತಲೂ ತೆಳುವಾದ ಪಾರದರ್ಶಕ ಪೊರೆ ಉಂಟು. ಈ ಹಂತದ ಡಿಂಬಗಳಿಗೆ ರ್ಯಾಬ್ಡಿಟಿ ರೂಪದ ಡಿಂಬಗಳೆಂದು ಹೆಸರು. ಇದು ಕೊಕ್ಕೆಹುಳುವಿನ ಜೀವನಚರಿತ್ರೆಯಲ್ಲಿ ಮೊದಲನೆಯ ಹಂತ. ಡಿಂಬದ ಅನ್ನನಾಳ ಮೊಟಕಾಗಿದ್ದು ಒಂದು ಗೋಳಾಕಾರದ ಉಬ್ಬಿನಂತೆ ಇರುತ್ತದೆ. ಡಿಂಬಗಳು ಜೌಗು ಮಣ್ಣಿನಲ್ಲಿರುವ ಸಾವಯವ ಪದಾರ್ಥವನ್ನು ಆಹಾರವಾಗಿ ಉಪಯೋಗಿಸಿಕೊಳ್ಳುತ್ತವೆ. ಮೂರು ದಿವಸಗಳ ಅನಂತರ ಫೈಲೆರಿಫಾರಂ ಎಂಬ ಎರಡನೆಯ ಘಟ್ಟವನ್ನು ತಲುಪುತ್ತವೆ. ಈ ಹಂತದಲ್ಲಿ ಇವುಗಳ ಅನ್ನನಾಳ ಸ್ವಲ್ಪ ಹೆಚ್ಚಿನ ಉದ್ದವಿರುತ್ತದೆ. ಡಿಂಬಗಳು ಕ್ರಮೇಣ ಬೆಳೆದು ಹೊರಗಿನ ಆಹಾರ ತಿನ್ನದಿರುವ ಫೈಲೆರಿಫಾರಂ ಡಿಂಬ ಎಂಬ ಮೂರನೆಯ ಘಟ್ಟಕ್ಕೆ ಬರುತ್ತವೆ. ಈ ಘಟ್ಟದಲ್ಲಿ ಇವಕ್ಕೆ ಮನುಷ್ಯನ ದೇಹವನ್ನು ಪ್ರವೇಶಿಸುವ ಸಾಮಥ್ರ್ಯ ಬರುತ್ತದೆ. ಸೂಕ್ತ ಪೋಷಕಜೀವಿಯ ಆಸರೆ ಸಿಕ್ಕದಿದ್ದರೆ ಇವು ಜೌಗು ಮಣ್ಣಿನಲ್ಲಿ ಒಂದೆರಡು ತಿಂಗಳುಗಳ ಕಾಲ ಜೀವಿಸಿರಲೂ ಬಲ್ಲವು. ಮೂರನೆಯ ಘಟ್ಟದ ಡಿಂಬಗಳು ಹೊರಗಿನಿಂದ ಆಹಾರ ತೆಗೆದುಕೊಳ್ಳದೆ, ತಮ್ಮ ಹಿಂದಿನ ಹಂತಗಳಲ್ಲಿ ಕೂಡಿಟ್ಟ ಆಹಾರಪದಾರ್ಥಗಳನ್ನು ಉಪಯೋಗಿಸಿಕೊಂಡು ಜೀವಿಸಿರುತ್ತವೆ. ಜೌಗು ಪ್ರದೇಶದಲ್ಲಿ ಕಾಲುಗಳಿಗೆ ರಕ್ಷಣೆಯಿಲ್ಲದೆ ನಡೆಯುವ ಅಥವಾ ಕೆಲಸ ಮಾಡುತ್ತಿರುವವರ ಕಾಲಿನ ಚರ್ಮವನ್ನು ಕೊರೆದು ಅದರ ದೇಹವನ್ನು ಪ್ರವೇಶಿಸುತ್ತವೆ. ಮನುಷ್ಯಚರ್ಮದ ಸ್ಪರ್ಶವಾದ ಕೂಡಲೆ ಡಿಂಬದ ಹೊರಕವಚ ಕಳಚಿ ಬೀಳುತ್ತದೆ. ಕ್ರಮೇಣ ಚರ್ಮವನ್ನು ಕೊರೆದು ಒಳತೂರಿ ರಕ್ತ ಪರಿಚಲನಮಂಡಲದಲ್ಲಿ ಸೇರುತ್ತವೆ. ರಕ್ತ ಅಥವಾ ಲಿಂಫ್ ನಾಳಗಳ ಮೂಲಕ ಶ್ವಾಸಕೋಶಗಳು ಶ್ವಾಸನಾಳ, ಅನ್ನನಾಳ ಮತ್ತು ಜಠರವನ್ನು ಹಾಯ್ದು ಸಣ್ಣ ಕರುಳನ್ನು ಪ್ರವೇಶಿಸುತ್ತವೆ. ಹೀಗೆ ಪೋಷಕ ಜೀವಿಯ ಅಂಗಾಂಗಗಳಲ್ಲಿ ಚಲಿಸುವ ಕಾಲದಲ್ಲಿ ಅವುಗಳ ಬೆಳೆವಣಿಗೆ ಮುಂದುವರಿಯುತ್ತದೆ. ಕೊನೆಗೆ ಸಣ್ಣ ಕರುಳಿನ ಜೆಜುನಮ್ ಭಾಗಕ್ಕೆ ಬಂದು ಒಳಪದರಕ್ಕೆ ಕಚ್ಚಿಕೊಂಡು ಒಂದು ವಾರದಲ್ಲಿ ಪ್ರೌಢಜೀವಿಯಾಗುತ್ತವೆ. ಕೊಕ್ಕೆಹುಳುವಿನ ಆಯುಸ್ಸು ಸುಮಾರು 3-4 ವರ್ಷಗಳು. ಇದು ರಕ್ತಹೀರಿ ಜೀವಿಸುವುದರಿಂದ ಹುಳುಗಳ ಸಂಖ್ಯೆ ಅತಿಯಾಗಿದ್ದರೆ ರೋಗಿ ರಕ್ತಕೊರೆಯಾಗಿ ಬಿಳಿಚಿಕೊಳ್ಳುತ್ತಾನೆ. ಈ ಸಾಂಕ್ರಾಮಿಕ ರೋಗದ ಪ್ರಾಬಲ್ಯವನ್ನು ತಡೆಗಟ್ಟಲು ರೋಗಿಗಳ ಮಲವನ್ನು ನಾಶ ಮಾಡಬೇಕು. ಡಿಂಬಗಳ ಬೆಳೆವಣಿಗೆಗೆ ನೆರವಾಗುವ ಸನ್ನಿವೇಶಗಳನ್ನು ಹತೋಟಿಯಲ್ಲಿಡಬೇಕು. ಜನ ಕಾಲಿಗೆ ರಕ್ಷಣೆಯಿಲ್ಲದೆ ಜೌಗುಪ್ರದೇಶಗಳಲ್ಲಿ ಓಡಾಡಬಾರದು.
(ಪಿ.ಎ.ಆರ್.; ವಿ.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ